ಪ್ರಸನ್ನ, ಇ ಎ ಎಸ್
	 1940-ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರರಲ್ಲೊಬ್ಬರು. ಪ್ರಪಂಚದ ಶ್ರೇಷ್ಠ ಆಫ್‍ಸ್ಟಿನ್ನರ್ ಎಂದು ಖ್ಯಾತರಾಗಿದ್ದಾರೆ. ಇವರ ಪೂರ್ಣ ಹೆಸರು ಎರ್ರಪಲ್ಲಿ ಅನಂತರಾವ್ ಶ್ರೀನಿವಾಸ್ ಪ್ರಸನ್ನ. ಹುಟ್ಟಿದ್ದು ಮೈಸೂರಿನಲ್ಲಿ 1940ರ ಮೇ 22 ರಂದು. ವಿದ್ಯಾಭ್ಯಾಸ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲೂ ಅನಂತರ ಮೈಸೂರಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್ ಕಾಲೇಜಿನಲ್ಲೂ ನಡೆಸಿ ಎಲೆಕ್ಟ್ರಿಕಲ್ ಎಂಜನಿಯರಿಂಗ್‍ನಲ್ಲಿ ಬಿ.ಇ. ಪದವಿ ಗಳಿಸಿದರು. ಓದುತ್ತಿದ್ದಾಗಲೇ ಉತ್ತಮ ಕ್ರಿಕೆಟ್‍ಪಟು ಎನಿಸಿಕೊಂಡಿದ್ದರು. ಇನ್ನೂ ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ತಂದೆ ತೀರಿಕೊಳ್ಳಲಾಗಿ, ಇವರ ವಿದ್ಯಾಭ್ಯಾಸಕ್ಕೆ ಮೈಸೂರು ರಾಜ್ಯ ಕ್ರಿಕೆಟ್ ಸಂಸ್ಥೆ ನೆರವು ನೀಡಿತು. ಕೆಲಕಾಲ ಇವರು ಕುದುರೆಮುಖ ಕಬ್ಬಿಣ ಅದುರು ಕಂಪನಿಯಲ್ಲಿ ಕೆಲಸ ಮಾಡಿದರು. ಸದ್ಯದಲ್ಲಿ ಇವರು ಆಸ್ಟ್ರೇಲಿಯದಲ್ಲಿ ನೆಲೆಸಿದ್ದಾರೆ.

	ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಪ್ರಸನ್ನ ಮೊದಲು ಆಡಿದ್ದು ಹೈದರಾಬಾದ್ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ (1961). ಆಗ ಮೈಸೂರಿನ ಪರವಾಗಿ ಆಡಿದ ಇವರು 15 ರನ್‍ಗಳಿಗೆ 3 ವಿಕೆಟ್ ಪಡೆದುದೆಲ್ಲದೇ 26 ರನ್ನುಗಳನ್ನು ಗಳಿಸಿ ಪ್ರಥಮ ದರ್ಜೆ ಪಂದ್ಯಗಳಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿಕೊಂಡರು.  ಕೇರಳದ ವಿರುದ್ಧ ಇನ್ನೊಮ್ಮೆ ಒಂದೇ ಇನ್ನಿಂಗ್ಸ್‍ನಲ್ಲಿ 8 ವಿಕೆಟ್ ಪಡೆದು ಕರ್ನಾಟಕಕ್ಕೆ ಕೀರ್ತಿ ತಂದರು. 1961-62ರಲ್ಲಿ ಭಾರತಕ್ಕೆ ಬಂದು ಎಂ.ಸಿ.ಸಿ. ತಂಡದ ವಿರುದ್ಧ ದಕ್ಷಿಣವಲಯದ ಪರವಾಗಿ ಆಡಿ 56 ರನ್ನುಗಳಿಗೆ 6 ವಿಕೆಟ್ ಪಡೆದು ರಾಷ್ಟ್ರದ ಹಿರಿಯ ಕ್ರಿಕೆಟ್ ಪರಿಣತರ ಗಮನ ಸೆಳೆದರು. ಅದೇ ವರ್ಷ ಮದರಾಸಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್‍ನಲ್ಲಿ ಇವರಿಗೆ ಪ್ರಪ್ರಥಮವಾಗಿ ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶ ದೊರಕಿತು. ಉತ್ತಮ ಬ್ಯಾಟುಗಾರರೂ ಆಗಿರುವ ಇವರು 1965ರ ರಣಜಿ ಪಂದ್ಯದಲ್ಲಿ ಮದರಾಸು ವಿರುದ್ಧ 43 ರನ್ ಗಳಿಸಿದರು. 1973ರಲ್ಲಿ ಮದರಾಸಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಇವರು 37 ರನ್ ಗಳಿಸಿದರು. ಇವರು ಉತ್ತಮ ಫೀಲ್ಡ್‍ರ್ ಕೂಡ. ಹತ್ತಕ್ಕಿಂತಲೂ ಹೆಚ್ಚು ಕ್ಯಾಚುಗಳನ್ನು ಹಿಡಿದಿದ್ದಾರೆ. ಇವರು 49 ಟೆಸ್ಟ್ ಪಂದ್ಯಗಳಲ್ಲಿ 189 ವಿಕೆಟ್‍ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಆಸ್ಟ್ರೇಲಿಯ, ವೆಸ್ಟ್ ಇಂಡೀಸ್ ಈ ಮೊದಲಾದ ರಾಷ್ಟ್ರಗಳ ಪ್ರಸಿದ್ಧ ಕ್ರಿಕೆಟ್ ಪಟುಗಳು ಪ್ರಸನ್ನ ಅವರ ಅದ್ಭುತ ಬೌಲಿಂಗ್ ವಿಧಾನವನ್ನು ಪ್ರಶಂಸಿಸಿದ್ದಾರೆ.

	ವಿನಯಶೀಲ ಹಾಗೂ ಸರಳ ವ್ಯಕ್ತಿಯಾದ ಇವರು ಬಹುತೇಕ ರಣಜಿ ಪಂದ್ಯಗಳಲ್ಲಿ ಕರ್ನಾಟಕ ಪಂಗಡದ ನಾಯಕರು. ಇವರಿಗೆ ಭಾರತ ಸರ್ಕಾರ 1968ರಲ್ಲಿ ಅರ್ಜುನ ಪ್ರಶಸ್ತಿಯನ್ನೂ 1970ರಲ್ಲಿ ಪದ್ಮಶ್ರಿ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. 1978ರಲ್ಲಿ ಕ್ರಿಕೆಟ್ ಜೀವನದಿಂದ ನಿವೃತ್ತಿ ಹೊಂದಿದರು.						     (ಎಸ್.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ